'ಜಾಕ್ ಫ್ರೂಟ್ ಕಟರ್' ಕರುಣಿಸಿದ 'ದಾನಿ ಪಟ್ಟ'!

(0 comments)

            'ಜಾಕ್ ಫ್ರೂಟ್ ಕಟರ್' ಕರುಣಿಸಿದ 'ದಾನಿ ಪಟ್ಟ' !  

       ನಮ್ಮ ಹನ್ನೆರಡನೆಯ  ತರಗತಿಯ ದಿನಗಳವು! ಎಂದಿನಂತೆ ಬ್ರೇಕ್ ಪೀರಿಯಡ್ ನಲ್ಲಿ  ರೂಮಿನ ಬಳಿ ಬಂದವರಿಗೆ ರೂಮಿನ ಹಿಂದೆಯೇ ಇದ್ದ ಹಲಸಿನ ಮರದಿಂದ ಹಣ್ಣು ಕೀಳುವುದು, ಕಿತ್ತು ರೂಮಿಗೆ ತರುವುದು ಕಷ್ಟವಾಗಿರಲಿಲ್ಲ. ಕಷ್ಟವಿದ್ದದ್ದು ಅದನ್ನು ಕೊಯ್ಯಲು ಬೇಕಾಗಿದ್ದ ಹತಾರದ್ದು. ಇದ್ದ ಒಂದು ಚಾಕನ್ನು ಅದ್ಯಾರು ಅದೆಲ್ಲಿ ಇಟ್ಟಿದ್ದರೋ. ಇಂತಹ ಕ್ಷಣದಲ್ಲಿ ನಮ್ಮ ಕಣ್ಣಿಗೆ ಬಿದ್ದದ್ದು ಮಾತ್ರ ಮೂಲೆಯಲ್ಲಿದ್ದ ಒಂದು ಫ್ಯಾನ್! 

       ಸರಿ, ಅದರ ರೆಕ್ಕೆಗಳನ್ನು ಕಂಡಷ್ಟೇ ಬೇಗನೆ ಬಿಚ್ಚಿದ್ದಾಯ್ತು.ಅದರಲ್ಲಿ ಒಂದು ರೆಕ್ಕೆ ನಮ್ಮ ಆ ಕ್ಷಣದ 'ಜಾಕ್ ಫ್ರೂಟ್ ಕಟರ್' ಆಗಿ ಪರಿವರ್ತನೆಯಾಗಿದ್ದಾಯ್ತು. ಅದರ ಸಹಾಯದಿಂದ ಹಲಸಿನ ಹಣ್ಣು ಕೊಚ್ಚಿ ತಿಂದದ್ದೂ ಆಯ್ತು. ಸಾಕ್ಷ್ಯ ನಾಶದಲ್ಲಿ ಪಳಗಿದ್ದ ಮಿತ್ರ ಮಹಾಶಯರುಗಳೆಲ್ಲಾ ಈ ನಮ್ಮ ಕಾರ್ಯ ಬೇರೆಯವರ, ವಿಶೇಷವಾಗಿ ಶಿಕ್ಷಕರ ಗಮನಕ್ಕೆ ಬಾರದಂತೆ ಅದನ್ನು ಒರೆಸಿ ಇಟ್ಟದ್ದೂ ಆಯ್ತು.ಇಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲವೇನೋ...!

        ಈ 'ಜಾಕ್ ಫ್ರೂಟ್ ಕಟರ್' ಬಳಕೆ ನಮ್ಮ ನಿತ್ಯದ ಕಾಯಕವಾಯಿತು. ಆರಂಭದಲ್ಲಿದ್ದ 'ಕಟರ್' ಅನ್ನು ಒರೆಸಿಡುವ ಆಸಕ್ತಿ ಕ್ರಮೇಣ ಕಡಿಮೆಯಾಯಿತು. ಅಷ್ಟೇ ಆಗಿದ್ದರೂ ಪರವಾಗಿರಲಿಲ್ಲವೇನೋ. ಇನ್ನೂ ಮುಂದುವರೆದು ಹಲಸಿನ ಹಣ್ಣಿನ ಮರದ ಬುಡಕ್ಕೇ 'ಕಟರ್' ಒಯ್ದು ಹಣ್ಣು ಕೊಚ್ಚಿ ತಿನ್ನುವ ರೂಢಿ ಜಾರಿಗೆ ಬಂತು. ಅದನ್ನೂ ಮೀರಿ ಬೇಕೆಂದಾಗ ಹಣ್ಣನ್ನು ಕೊಚ್ಚಿ ತಿಂದು, ಬುಡದಲ್ಲಿಯೇ ನಮ್ಮ 'ಕಟರ್' ಅನ್ನು ಬಿಟ್ಟು ಬರುವಂತಾಯಿತು...

         ಹೀಗೆ ಬಿಟ್ಟು ಬಂದಿರುವಾಗಲೇ ಒಮ್ಮೆ ನಮ್ಮ ಶಾಲೆಯ ಮಾನ್ಯ ಪ್ರಾಂಶುಪಾಲರು ಆಕಸ್ಮಿಕವಾಗಿ ನಮ್ಮ ರೂಮಿನ ಹಿಂಬದಿಗೆ ಹೋಗಿಬಿಡಬೇಕೆ! ಹೋದವರ ದಿವ್ಯ ದೃಷ್ಟಿಯೋ 'ನಮ್ಮ ಹಲಸಿನ ಮರ'ದ ಬುಡದಲ್ಲಿದ್ದ 'ಕಟರ್'ನೆಡೆಗೆ ಬೀಳಬೇಕೆ!! 

         ದೃಷ್ಟಿ ಬಿದ್ದೊಡನೆ ಸಹಜವಾಗಿಯೇ ಸಿಡಿಮಿಡಿಗೊಳ್ಳುತ್ತಾ, ಅಷ್ಟೂ ದಿನಗಳ ಕಾಲ ನಮ್ಮ ಆಪ್ತ ಒಡನಾಡಿಯಂತಾಗಿದ್ದ 'ಜಾಕ್ ಫ್ರೂಟ್ ಕಟರ್' ಅನ್ನು 'ಸೀಝ್' ಮಾಡಿಕೊಂಡು ಅವರ ಚೇಂಬರ್ ಗೆ ತಂದು, ನಮಗೂ ಬರುವಂತೆ 'ಪ್ರೀತಿಯ ಆಹ್ವಾನ'ವಿತ್ತರು... 

          ನಾವಾದರೋ 'ಕಸದಿಂದ ರಸ' ಮಾಡಿದವರೆಂಬಂತೆ ಭಾವಿಸುತ್ತಾ, ಬಳಕೆಗೆ ಬಾರದ ಫ್ಯಾನ್ ರೆಕ್ಕೆಯೊಂದನ್ನು 'ಜಾಕ್ ಫ್ರೂಟ್ ಕಟರ್'  ಆಗಿ ಪರಿವರ್ತಿಸಿ ಬಳಸಿದ ಬುದ್ಧಿವಂತಿಕೆಗೆ ಪ್ರಶಂಸೆ ನಿರೀಕ್ಷಿಸಿದವರಂತೆ ಮಾತನಾಡ ಹೊರಟೆವು. ಅವರೋ ನಾವು ಮಾಡಬಾರದ ಯಾವುದೋ 'ಮಹಾ ಅಚಾತುರ್ಯ' ವನ್ನು ಮಾಡಿರುವೆವೆಂದು ಪರಿಭಾವಿಸುತ್ತಾ, ಇದರ ಆಧಾರದಲ್ಲಿಯೇ ಮುಂದೆ ನಾವು ದೊಡ್ಡ 'ಡಾಕು'ಗಳಾಗುವೆವು ಎಂಬಂತೆ ಭವಿಷ್ಯ ನುಡಿಯುತ್ತಾ 'ಆಂಗ್ಲ ಭಾಷಾ ನಿಘಂಟಿನಲ್ಲಿದ್ದ ಉತ್ತಮೋತ್ತಮ ಪದ'ಗಳನ್ನೆಲ್ಲಾ ನಮ್ಮ ಮೇಲೆ ಪ್ರಯೋಗಗೈದರು. ಪ್ರತಿಯಾಗಿ ನಾವುಗಳು ಅಮಾಯಕ ಶಿಶುಗಳಂತೆ ಮುಖ ಭಾವ ಮಾಡಿ, ಅವರ ಸಕಲ ಅಮೃತೋಪನ್ಯಾಸವನ್ನು ಸಾವಧಾನದಿಂದ ಆಲಿಸುವವರಂತೆ ತೋರ್ಪಡಿಸಿಕೊಂಡು, ಕ್ಷಮೆ ಕೇಳಿ ರೂಮಿಗೆ ಮರಳಿದೆವು. ಅಲ್ಲಿಗೆ 'ಜಾಕ್ ಫ್ರೂಟ್ ಕಟರ್'ಗೂ ನಮಗೂ ಇದ್ದ  ಸಂಬಂಧ ಮುಗಿಯಿತೆಂದು ಕೊಂಡಿದ್ದೆವು! 

       ಆದರೆ ಈ ಸಂಬಂಧ ಮುಗಿದಿರಲಿಲ್ಲವೆಂಬುದು ನಮಗೆ ಅರಿವಾಗಿದ್ದು ನಾವು ನವೋದಯ ಬಿಟ್ಟು ಬರುವಾಗ ಮಾನ್ಯ ಪ್ರಾಂಶುಪಾಲರು 'ನೋ ಡ್ಯೂ ಸರ್ಟಿಫಿಕೇಟ್' ನೀಡುವ ಮುನ್ನ ಆ ಕಾಲಕ್ಕೆ ತುಸು ಹೆಚ್ಚೇ ಎನ್ನಬಹುದಾದ 'ಐವತ್ತು ರೂಪಾಯಿಗಳ' ರಸೀದಿಯನ್ನು ನಮಗೆ ನೀಡಿದಾಗಲೇ...!

      ದಂಡ ಹಾಕಿದ್ದರೆಂದು ಭಾವಿಸಬೇಡಿ!

      ಆ ರಸೀದಿಯಲ್ಲಿ, "ದಾನಿಗಳಾದ ಶ್ರೀಯುತ ........ರವರಿಂದ ಶಾಲಾ ಅಭಿವೃದ್ಧಿ ನಿಧಿಗೆ 50ರೂ.ಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸಿದೆ" ಎಂದಿರುವುದರೊಂದಿಗೆ ಸಣ್ಣ ಪ್ರಾಯದಲ್ಲೇ ಅಧಿಕೃತ ದಾನಿಗಳ ಪಟ್ಟವನ್ನು ನಮಗೆ ಕರುಣಿಸಿತ್ತು!!

 

 

                    - ಪೂರ್ಣೇಶ್ ಮತ್ತಾವರ, 7th batch (1992-1999)

Currently unrated

Comments

There are currently no comments

New Comment

required

required (not published)

optional